ತೈರಾಕ್ಸೀನ್ -
ತೈರಾಯ್ಡ್ ಗ್ರಂಥಿ ಸ್ರವಿಸುವ ಒಂದು ಹಾರ್ಮೋನ್. ಇದರ ಅಣುಸೂತ್ರ C15 H11 O4 NI4  ರಚನಾ ಸೂತ್ರ ಈ ಮುಂದಿನಂತೆ ಇದೆ.

ಚಿತ್ರ-1

ಚಿತ್ರ-2

ತೈರಾಯ್ಡ್ ಗ್ರಂಥಿಯಿಂದ ತೈರಾಕ್ಸೀನನ್ನು ಮೊದಲ ಬಾರಿಗೆ (1916) ಬೇರ್ಪಡಿಸಿದಾತ ಕೆಂಡಲ್:  ಸುಮಾರು 50,000 ದನಗಳಿಂದ 3 ಟನ್ನುಗಳಷ್ಟು ತೈರಾಯ್ಡ್ ಗ್ರಂಥಿಯನ್ನು ಕಲೆಹಾಕಿ ಸಂಸ್ಕರಿಸಿದಾಗ 33 ಗ್ರಾಮ್ ತೈರಾಕ್ಸೀನ್ ಉಂಟಾಯಿತು. ಆದ್ದರಿಂದ ಬೇರ್ಪಡಿಕೆಯ ಕ್ರಿಯೆ ಎಷ್ಟು ಪ್ರಯಾಸಕರ ಎಂಬುದರ ಅರಿವಾದೀತು. ತೈರಾಯ್ಡ್ ಗ್ರಂಥಿಯಲ್ಲಿರುವ ಅಯೋಡೀನಿನ ಒಂದಂಶ ಡೈಅಯೊಡೊ ಟೈರೊಸಿನ್ ರೂಪದಲ್ಲಿರುವುದು.  ಇದರ ದ್ರಾವಣವನ್ನು Pಊ 8.8 ಮತ್ತು 700ಅ ಯಲ್ಲಿ ಕೆಲವು ದಿನಗಳ ಕಾಲ ಇಟ್ಟರೆ ತೈರಾಕ್ಸೀನ್ ರೂಪುಗೊಳ್ಳತ್ತದೆ.  ಅದರಲ್ಲಿ  ಮಾನವನ ತೈರಾಯ್ಡ್ ಗ್ರಂಥಿಯ ತೂಕ ಸುಮಾರು 20 - 25 ಗ್ರಾಮ್‍ಗಳು.  ಅದರಲ್ಲಿ ಸುಮಾರು 20 ಮಿಲಿಗ್ರಾಮ್ ತೈರಾಕ್ಸೈನ್ ಮತ್ತು 40 ಮಿಲಿಗ್ರಾಮ್ ಡೈಅಯೊಡೊ ಟೈರೋಸಿನ್ನುಗಳು ಇರುವುವೆಂದು  ಒಂದು ಅಂದಾಜು.

ದೇಹದಲ್ಲಿ ಜೀವದ್ರವ್ಯ ರೂಪಣೆಯ ದರವನ್ನು ಇದು ನಿಯಂತ್ರಿಸುವುದರಿಂದ ಹಾರ್ಮೋನಿಗೆ  ಪ್ರಾಸಶ್ತ್ಯ. ಇದರ ಉತ್ಪಾದನೆ ಹೆಚ್ಚಿದಂತೆ ಜೀವದ್ರವ್ಯ ರೂಪಣೆಯ ಕಾರ್ಯವೂ ತೀವ್ರಗೊಳ್ಳುವುದು.  ಅಂದರೆ ಈ ಜೈವಿಕ  ಪ್ರಕ್ರಿಯೆಗೆ ತೈರಾಕ್ಸೀನ್ ಕ್ರಿಯಾವರ್ಧಕವಿದ್ದಂತೆ,  ತೈರಾಕ್ಸೀನ್ ಒಂದನ್ನೇ ನೇರವಾಗಿ ಸೂಜಿಮದ್ದಿನ ರೂಪದಲ್ಲಿ ಸೇರಿಸಿದಾಗ ಪರಿಣಾಮಗಳು ಉಂಟಾಗುವುದಿಲ್ಲ. ಆದ್ದರಿಂದ ತೈರಾಯ್ಡ್ ಗ್ರಂಥಿಯಲ್ಲಿ ಈ ಹಾರ್ಮೋನು ತನ್ನ ನಿಜರೂಪದಲ್ಲಿ ಇರಲಾರದೆಂದೂ ತೈರೋಗ್ಲಾಬ್ಯುಲಿನ್  ಎಂಬ ಪ್ರೋಟಿನಿನ ರೂಪದಲ್ಲಿ ಇರುವುದೆಂದೂ ಭಾವಿಸಲಾಗಿದೆ.   ತೈರಾಕ್ಸೀನ್ , 3;5 ಡೈಅಯೊಡೊಟೈರೊಸಿನ್ ಮತ್ತು ಇತರ ಅಮೈನೊ ಅಮ್ಲಗಳ ಸಂಯೋಗದಿಂದ ತೈರೋಗ್ಲಾಬ್ಯುಲಿನ್ ರೂಪುಗೊಳ್ಳುವುದು.   ಪಿಟ್ಯೂಟರಿ ಗ್ರಂಥಿ ಒದಗಿಸುವ ಒಂದು ತೈರೋಟ್ರೋಪಿಕ್ ಹಾರ್ಮೋನಿನ ಪ್ರಭಾವದಿಂದ ತೈರೋಗ್ಲಾಬ್ಯುಲಿನ್ ತೈರಾಕ್ಸೀನಾಗಿ ಪರಿವರ್ತಿವಾಗಿ ಕಾರ್ಯೋನ್ಮುಖವಾಗುತ್ತದೆ. ಊತಕಗಳಲ್ಲಿ ತೈರಾಕ್ಸೀನ್ ಅಯೋಡಿನನ್ನು ಭಾಗಶಃ ಕಳೆದುಕೊಂಡು ತನಗಿಂತ ಪಟುವಾದ ಟ್ರೈಅಯೊಡೆತೈರೊನೈನ್ ಎಂಬ ಇನ್ನೊಂದು ಹಾರ್ಮೊನನ್ನು ಕೊಡಬಹುದು. ಶರೀರ ಪೋಷಣೆಗೆ ಅಗತ್ಯವಾದಷ್ಟು ಅಯೋಡಿನ್ ಸಾಮಾನ್ಯವಾಗಿ ನಾವು ಕುಡಿಯುವ ನೀರು ಮತ್ತು ಸೇವಿಸುವ ಆಹಾರದ ಮೂಲಕ ಸರಬರಾಜಾಗುತ್ತದೆ. ಹಾಗಾಗದಿದ್ದಾಗ ತೈರಾಯ್ಡ್ ಗ್ರಂಥಿ ಅಗತ್ಯ ಪ್ರಮಾಣದಲ್ಲಿ ತೈರಾಕ್ಸೀನನ್ನು ಉತ್ಪಾದಿಸುವುದಿಲ್ಲ. ಆಗ ಹೈಪೊತೈರಾಯ್ಡಿಸಮ್ ಎಂಬ ಕೊರತೆ ಸನ್ನಿಹಿತವಾಗುವುದು. ದೇಹದ ಸಹಜ ಉಷ್ಣತೆ ತಗ್ಗುವುದು.  ಸಾಮಾನ್ಯ ಚಳಿಯನ್ನೂ ತಡೆಯಲಾಗದ ಸ್ಥಿತಿ, ಮುಖ ಊದಿಕೊಳ್ಳುವುದು, ಚರ್ಮ ಒಣಗಿ, ಒರಟಾಗುವಿಕೆ, ಕೂದಲು ಉದುರುವುದು ಮತ್ತು ಬೊಜ್ಜು ಈ ರೋಗದ ಲಕ್ಷಣಗಳು.  ಜೊತೆಗೆ  ತೈರಾಯ್ಡ್ ಗ್ರಂಥಿ ಊದಿಕೊಳ್ಳುತ್ತದೆ. ಇದನ್ನು ಸಾಮಾನ್ಯ ಗಳಗಂಡ (ಸಿಂಪಲ್ ಗಾಯ್ಟರ್) ಎನ್ನುವುದುಂಟು. ಇವೆಲ್ಲ ವಯಸ್ಕರಲ್ಲಿ ಆಗುವ ಪರಿಣಾಮ ಮಕ್ಕಳಲ್ಲಿ ಅದರೆ ಅವುಗಳ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಕುಂಠಿತವಾಗಿ ಅವರು ಕುರೂಪಿಗಳೂ ಹೆಡ್ಡರೂ ಆಗಿ ಉಳಿದುಬಿಡುವ ಸಂಭವಿದೆ; ಸಕಾಲದಲ್ಲಿ ಈ ಲಕ್ಷಣಗಳನ್ನು ಗಮನಿಸಿ ರೋಗಿಯ ಅಹಾರದಲ್ಲಿ ಅಗತ್ಯ ಪರಿಮಾಣದ ಅಕಾರ್ಬನಿಕ (ಇನಾಗ್ರ್ಯಾನಿಕ್) ಅಯೊಡೈಡುಗಳನ್ನು ಕೂಡಿಸಿಕೊಡುವುದರಿಂದ ಅವರನ್ನು ಅರೋಗ್ಯವಂತರಾಗಿ ಮಾಡಬಹುದು.

ತೈರಾಯ್ಡ್ ಗ್ರಂಥಿ ಮಿತಿ ಮೀರಿ ಪಟುವಾಗಿ ಅದು ಸ್ರವಿಸುವ ತೈರಾಕ್ಸೀನಿನ ಪರಿಣಾಮ ವಿಪರೀತವಾದರೆ ಆಗಲೂ ತೊಂದರೆ ತಪ್ಪಿದ್ದಲ್ಲ.  ಆಗ ಗ್ರೇವ್ಸ್ ರೋಗ ತಲೆದೊರುವುದು.  ಸಾಕಷ್ಟು ಅಹಾರ ಸೇವಿಸಿದರೂ ಶರೀರದ ತೂಕ ಇಳಿಮುಖವಾಗುವುದು.  ದೇಹದ ಸಹಜ ಉಷ್ಣತೆಯಲ್ಲಿ ಏರಿಕೆ, ವಿಪರೀತ ಬೆವರುವುದು, ನಾಡಿ ಮಿಡಿತದ ಹೆಚ್ಚಳ ಮುಂತಾದ ಚಿಹ್ನೆಗಳು ಕಂಡುಬಂದರೆ ಹೈಪರ್‍ತೈರಾಯ್ಡಿಸಮ್ ಉಂಟಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂಥ ರೋಗಿಯ ಕಣ್ಣುಗುಡ್ಡೆಗಳು ಸಾಮಾನ್ಯವಾಗಿ ಹೊರಚಾಚಿಕೊಂಡಿರುತ್ತವೆ. ಅದ್ದರಿಂದ ಇದನ್ನು ಮೆಡ್ಡಗಣ್ಣಿನ ಗಳಗಂಡ (ಎಕ್ಸೋಪ್ತ್ಯಾಲ್ಮಿಕ್ ಗಾಯ್ಟರ್) ಎಂದು ಕರೆಯುವುದು ವಾಡಿಕೆ.  ಥಯೋಯೂರಿಯ, ಥಯೋಯೂರಸಿಲ್ ಮೊದಲಾದ  ಗಂಧಕಯುಕ್ತ ಕಾರ್ಬನಿಕ್ ಸಂಯುಕ್ತಗಳ ಪ್ರಯೋಗದಿಂದ ತೈರಾಕ್ಸೀನಿನ ಉತ್ಪಾದನೆಯನ್ನು ಮಂದಗೊಳಿಸಿ ದೇಹಸ್ಥಿತಿಯನ್ನು ಸುಧಾರಿಸುವುದು ಚಿಕಿತ್ಸಾಕ್ರಮ.  ಇದರ ಸಲುವಾಗಿ ಈಚೆಗೆ ವಿಕಿರಣಪಟು ಅಯೋಡಿನನ್ನು ಬಳಸುತ್ತಿದ್ದಾರೆ.                      				(ಎಚ್.ಜಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ